Saturday, 22 September 2018

ಹವಿಗನ್ನಡದಲ್ಲೊಂದು ಕಥೆ

ವಾಟ್ಸಾಪ್ ನಿನಗೆ ಹ್ಯಾಟ್ಸಾಫ್.


ಇವಕ್ಕೆ ಈಗ ಈಗ ಕೋಪ ಜಾಸ್ತಿ ಆಯಿದು. ಊರಿನ ವಿಷಯಂಗಳ ಎಲ್ಲ ತಲೆಗೆ ಹಚ್ಚಿಗೊಂಬದು, ಒಟ್ರಾಸಿ ಬೆಚ್ಚ ಮಾಡಿಗೊಂಬದು.

ಮಾಲಿಂಗಣ್ಣನ ಮನೇಲಿ ಕರವಾಗ ದನ ಮೆಟ್ಟಿ ಬಾಲ್ದಿಯ ಕೌಂಚಿ ಹಾಕಿದ್ದಕ್ಕೂ, ಸೇಸ ನಾಯ್ಕನ ಅಳಿಯ ಸಮಾ ಕುಡಿತ್ತನಡ ಹೇಳ್ತದಕ್ಕೂ, ಫಕ್ರು ಬ್ಯಾರಿಯ ಅಂಗಡಿಲಿ ಹೆಗ್ಗಣದ ಕಾಟ ಇಪ್ಪದರನ್ನೂ ತಲೆಗೆ ಹಚ್ಚಿಗೊಂಡು ಸರೀ ಉಣ್ಣದ್ದೆ ಕೂಬದು….

“ಇದಾ ಸುಮಂಗಲೇ ,ನೀ ಹೀಂಗೆ ಮಾಡ್ವದು ಎನಗೆ ಇಷ್ಟವೇ ಇಲ್ಲೆ  ” ಹೇಳಿ ಮೊನ್ನೆ ಬೈದಪ್ಪಗ ಎನಗೆ ರಜ್ಜ ಹೆದರಿಕೆ ಆಯಿದು.

ಎಂತದಕ್ಕೆ ಹೀಂಗೆ ಮಾಡ್ತವಪ್ಪಾ ಹೇಳಿ ತಲೆಗೆ ಕೈ ಮಡುಗಿ ಕೂದಿಪ್ಪಗ ಫ್ಲೇಷ್ ಆತು.


ದೀಪನ ಕೊಟ್ಟು ಐದು ವರ್ಷ ಆತು. ಅದರ ಗೆಂಡಂಗೆ ಬೆಂಗಳೂರಿಲೇ ಉದ್ಯೋಗ. ಅದರ ಅತ್ಯೋರೂ, ಮಾವನೋರುದೆ ಊರಿಲಿಪ್ಪ ಜಾಗೆ ಮಾರಿ ಬೆಂಗಳೂರು ಸೇರಿದ್ದವು. ಒಳ್ಳೆ ಕೊಳಕ್ಕೆ ಗದ್ದೆಯೂ, ಹತ್ತೆಕ್ರೆ ಅಡಕ್ಕೆ ತೋಟವೂ ಇದ್ದತ್ತು. ಮಕ್ಕೊಗೆ ಊರು ಬೇಡಡ.

ಎಂತಾ ಅವಸ್ಥೆಯೋ!

ಇನ್ನು ದಿವ್ಯನುದೆ ಬೆಂಗಳೂರಿಲೇ ಇಪ್ಪದು ಈಗ. ಎರಡು ವರ್ಷದ ಹತ್ರ ಆತು ಕಂಪನಿ ಲಿ ಮಣ್ಣು ಹೊರ್ತದು.

ಏವ ಮಾಣಿಯ ತೋರಿಸಿರೂ ಬೇಡ ಬೇಡ ಹೇಳ್ತು.

ಮಹೇಶ ಈಗ ಫೈನಲ್ ಯರ್ ಲಿ ಇಪ್ಪದು.  ವಿಪ್ರೋ ಲಿ ಜೋಬು ನಿಗಂಟಾಯ್ದು.


ಮಕ್ಕೊ ಎಲ್ಲಾ ದೂರ ಹೋವ್ತವನ್ನೇ ಹೇಳಿ ಒಬ್ಬನೇ ಕೊರಗುತ್ತವು. “ಇದಾ, ಎಂತಾತು ಹೇಳೀಳಿ “ಹೇಳಿ ಬಡ್ಕೊಂಡರೂ ಎಂತೂ ಹೇಳ್ತವಿಲ್ಲೆ. ಆನು ಎಂತ ಮಾಡಿ ಸಾವದು ಗೊಂತಾವುತ್ತಿಲ್ಲೆ.


ಈ ದಿವ್ಯಂಗೂ, ಮಹೇಶಂಗೂ ಹೇಳಿರೆ ಭಾಷೆ ಇಲ್ಲೆ. ಎಷ್ಟು ಹೊತ್ತು ನೋಡಿರೂ ಫೋನಿಲಿ ಗುರುಟಿಯೋಂಡು ಇಪ್ಪದು.

ಮನೆಗೆ ಬಂದಿಪ್ಪಗ ಆದರೂ ಅದರ ಕರೇಲಿ ಮಡುಗಿ ಹೇಳಿರೆ ಇಲ್ಲೆ. ಆರತ್ರೆ ಮೆಸೇಜು, ಫೋನು ಹೇಳಿರೆ ಮಹೇಶನತ್ತರೆ, ದಿವ್ಯಕ್ಕನತ್ತರೆ ಹೇಳಿ ಹೇಳ್ತವು.

ಒಬ್ಬಂಗೊಬ್ಬನ ನೋಡಿದರೆ ಕಾದುವವಕ್ಕೆ ಫೋನಿಲಿ ಎಂತಪ್ಪಾ ಚೆಂಙಾಯಿ ಹೇಳಿ ಇವಕ್ಕೆ ಸಂಶಯ.


ಲವ್ವು ಮಣ್ಣ ಇದ್ದೋ ಹೇಳಿ ಹೆದರಿ ಹೆದರಿ ಬಿ ಪಿ, ಶುಗರ್ ಕಂಟ್ರೋಲ್ ಗೆ ಬತ್ತಿಲ್ಲೆ.

ಅಲ್ಲಾ, ದಿವ್ಯ ಆ ಕಲ್ಲುರಾಯರ ಮಗಳಿಂಗೆ ಕೊಟ್ಟ ನಿನ್ನ ನೋಟ್ ಪುಸ್ತಕ ತಾ, ತಮ್ಮಂಗಾತು ಹೇಳಿರೆ, ತತ್ತಿಲ್ಲೆ. ಹೆಳೆ ಹೇಳ್ತು಼. ಈ ಆಸಾಮಿಯತ್ರೆ ಅಕ್ಕನ ಪುತ್ತೂರಿಂಗೆ ಕರಕ್ಕೋಂಡು ಹೋಗಿ ಬಾ ಹೇಳಿರೆ ಕೇಳ, ಇವ್ವು ಇಡೀ ದಿನ ಅತ್ಲಾಗಿತ್ಲಾಗಿ ಮೆಸೇಜ್ ಮಾಡುವುದು ಅಪ್ಪೋ ಹೇಳಿ ಎನ್ನತ್ರೆ ಕೇಳಿ ಎನ್ನ ತಲೆಯೂ ಹಾಳು ಮಾಡಿದವು.

ಇನ್ನೊಂದರಿ ಬಂದಿಪ್ಪಗ ಇವರ ಇಬ್ರ ಫೋನಿನ ಬಲುಗಿ ತೋಡಿಂಗೆ ಇಡುಕ್ಕುತ್ತೆ ಹೇಳಿ ಇವ್ವು ಮೊನ್ನೆ ಚೌತಿ ಸಮಯಲ್ಲಿ ಕಿರುಚಾಡಿದವು.

ನಮ್ಮ ದಿವ್ಯಂಗೆ ಕಡೆಂಗೋಡ್ಲು ಶಂಕರಣ್ಣ ನ ಮಗ ಅನೀಶನ ಮೇಲೆ ಮನಸ್ಸಾಯಿದಡ‌. ಮಾಣಿ ಭಾರೀ ಉಶಾರಿದ್ದ, ಇದರ ಮೇನೇಜರಡ.

ಈ ವಾಟ್ಸಾಪ್ ಎನ್ನ ಹಳ್ಳ ತೋಡಿತ್ತು ಹೇಳಿ ಎಂತೆಂತೆಲ್ಲಾ ಬೇಡದ್ದು ಹೇಳಿಗೊಂಡು ತಲೆ ಚಚ್ಚಲೆ ಇವ್ವು ಹೆರಟವು. ಆನು ಕೈಲಿದ್ದ ತಂಬ್ಳಿ ಪಾತ್ರ ಕೆಳ ಹಾಕಿ, ಇವರತ್ರೆ ಓಡಿ ಸಮಾಧಾನ ಮಾಡಿದೆ.

ಮಾಣಿಗೆ ಒಂದೂವರೆ ಲಕ್ಷ ಸಂಬಳ ಇದ್ದು, ಬೆಂಗಳೂರಿನ ಬೆಳಿಗೆದ್ದೆಲಿ ಸ್ವಂತ ಫ್ಲೇಟು ಇದ್ದಡ, ಊರಿಲಿ ೫೦ಖಂಡಿಯ ತೋಟ ಇವನ ಪಾಲಿಂಗೆ ಬತ್ತಡ ಹೇಳಿ ಎಲ್ಲಾ ಹೇಳಿಯಪ್ಪಗ ರಜ್ಜ ಸಮಾಧಾನ ಆತು ಇವಕ್ಕೆ.

ನಾವು ಜಾತಕ ಹೊಂದುತ್ತೋ ಹೇಳಿ ಹೆರಡುತ್ತಿದ್ದರೆ ಈ ಶಂಕರಣ್ಣನವು ಮೂಸಿಯೂ ನೋಡುತ್ತಿತ್ತವಿಲ್ಲೆ , ಈಗ ಅವ್ವೇ ಕೂಸು ಕೊಡ್ತೀರಾ ಹೇಳಿ ಕೇಳಿದ್ದರಲ್ಲಿ ಇವಕ್ಕೆ ಭಯಂಕರ ಕೊಶಿ ಆತು.


ದಿವ್ಯ ನ ಹತ್ತರೆ ದಿನುಗೊಳಿ ತಪ್ಪಾತು ಕೈ ನೆಗ್ಗಿದ್ದು ಹೇಳಿ ಕೊಂಡಾಟ ಮಾಡಿದವು. ಅಪ್ಪನ ಪುಸುಲಾಯಿಸಲೆ ಹೇಳಿ ಅದು ತೆಕ್ಕೊಂಡು ಬಂದ ೧೦,೦೦೦ದ  ಫೋನಿಂಗೆ ಇವರ ಹಳೆ ಸಿಮ್ಮಿನ ಅಡಕತ್ತರಿಲಿ ತುಂಡು ಮಾಡ್ಸಿ ಹಾಕಿದವು.


ವಾಟ್ಸಾಪ್ ಲಿ ನಮ್ಮ ಪೈಕಿ ಯ ಗುಂಪಿಲಿ ಈ ಮಕ್ಕೊ ಅಂಬಗಂಬಗ ಎಂತಾರು ಚೆರೆಪೆರೆ ಮಾಡಿ ಉಪದ್ರ ಆವುತ್ತು ಹೇಳಿ ಇವರ ವಾಟ್ಸಾಪ್ ಪುರಾಣ ಮತ್ತೆ ಶುರುವಾತು.

ಬಲುಗ್ಗಿ ಇಡ್ಕೆಕು ಹೇಳಿ ವಾರಕ್ಕೆ ನಾಕು ಸರ್ತಿ ಹೇಳ್ತವು.

ಹೀಂಗೆ ಇಪ್ಪಗ ನಮ್ಮ ದಿವ್ಯ ನ ಮದುವೆ ಬಗ್ಗೆ ಅಂತೆಕಂತೆಗೊ ಶುರುವಾತು.

ಪೈಕಿಯವಕ್ಕೆ ಹೇಳದ್ದೆ ಕಳಿಯ ಹೇಳುವಲ್ಲಿಗೆ ಎತ್ತಿತ್ತು಼.

ಇವಕ್ಕೆ ಎಂತ ಮಾಡುವದು ಹೇಳಿ ಮಂಡೆಬೆಚ್ಚ. ಅದು ಆರು ಜಾತಕ ಪೋಸ್ಟ್ ಮಾಡಿದ್ದು, ಕೂಸು ನೋಡಲೆ ಬಂದಿಪ್ಪಗ ಗೆಣಂಗಿನ ಪೋಡಿಯೋ, ದೀಗುಜ್ಜೆದೋ ಹೇಳಿ ಕೇಳುಗನ್ನೆಪ್ಪಾ ಹೇಳಿ ಪರಂಚಿದವು.


ಅಷ್ಟಪ್ಪಗ ಕುಂಯ್ಯ್ ಹೇಳಿ ವಾಟ್ಸಾಪ್ ಮೆಸೇಜು ಬಂದದು ನೋಡಿ ಒಂದು ತೆಲಿಕ್ಕೆ ಬಂತು.

ಹೀಂಗೆ ಹೀಂಗೆ ಹೇಳಿ ಅನೀಶನ ಬಗ್ಗೆ, ಶಂಕರಣ್ಣನವರ ಬಗ್ಗೆ ಮಹೇಶನತ್ತರೆ ಟೈಪು ಮಾಡಿಸಿ ಎಲ್ಲೋರಿಂಗೂ ಕಳುಸಿದವು.

ಅಜ್ಜನ ಮನೆ ಗುಂಪು, ಅಪ್ಪಚ್ಚಿ ಮಕ್ಕೊಗೆ, ಕಡೇಂಗೆ ಎನ್ನ ಮನೆಯವಕ್ಕೂ ಕಳುಹಿಸಿ , ಸಮಾಧಾನಲ್ಲಿ  ಎರಡು ಸೌಟು ಹೆಚ್ಚು ಅಶನವೂ.ಉಂಡು ಬಚ್ಚಿರೆ ಹಾಕಿದವು.

ಇದಾಗಿ ಎರಡು ತಿಂಗಳಿಂದ ಯಾವ ಬೆಚ್ಚವೂ ಇಲ್ಲೆ.

ತೋಟಕ್ಕೆ ಹೋಪಗಳೂ ವಾಟ್ಸಾಪ್ ಒತ್ತುತ್ತವು.

ಭಟ್ಟಕ್ಕೊಗೆ ಬಪ್ಪ ತಿಂಗಳ ಬದ್ಧದ ದಿನ ನೆಂಪುಸಿಯೋಂಡು,

ಈ ಅನೀಶ ಯಾವುದೋ ಪುರ್ಬುವಿನ ಹೆಸರಿನ ಅಂಗಡಿಲಿ

ಬಟ್ಟೆ ತೆಗೆದ ಫೊಟೋ, ದೀಪ ನ ೩ ವರ್ಷದ ಮಗಳ ಬಾತುಕೋಳಿ ಮೋರೆಯ ನೋಡಿಗೊಂಡು ಒಬ್ಬನೇ ನೆಗೆ ಮಾಡಿ ಕೂಬದು.

ಎಷ್ಟು ದನುಗೊಳಿರೂ ಕೇಳ. ಇನ್ನು ಮಂಟಪಲ್ಲಿ ಫೋನ್ ನೋಡಿ ಗೊಂಡು ಕೂರದ್ದರೆ ಸಾಕು. ಬಲುಗಿ ಇಡುಕುವ ಹೇಳಿ ಕಾಣ್ತು.

ಇವರೊಟ್ಟಿಂಗೆ ಸಾಕಾತಪ್ಪ…….

ಅನೂಪ°

ಭಾಷಾಂತರದ ಅವಾಂತರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಬೇರೆ ಮಾತೃಭಾಷೆ ಹೊಂದಿರುವ ಜನರಿದ್ದಾರೆ. ಆ‌ ಭಾಷೆಗಳೂ ತೀವ್ರವಾಗಿ ಕನ್ನಡೀಕರಣಗೊಂಡು, ತಮ್ಮೊಳಗೆ ಹಲವು ಪ್ರಭೇದಗಳನ್ನು ಹೊಂದಿ, ಇಂದು ವಿನಾಶದ ಅಂಚಿನಲ್ಲಿವೆ.

ನಮ್ಮ ತಂದೆಯ ಮನೆಮಾತು ಮರಾಠಿ. ಹಾಗೆಂದು ನಮ್ಮಪ್ಪನೋ, ತಾತನೋ ಮಹಾರಾಷ್ಟ್ರ ದಿಂದ ಬಂದವರೇನಲ್ಲ. ಶಿವಾಜಿ ಮಹಾರಾಜರ ಕಾಲದಲ್ಲೋ ಅಥವಾ ಸಾಂಭಾಜಿಯ ಕಾಲದಲ್ಲೋ ಒಂದಷ್ಟು ಜನ ಈಗಿನ ಸಾತಾರಾ ಜಿಲ್ಲೆಯ ಕರಾಡದಿಂದ ದಕ್ಷಿಣ ಕನ್ನಡದ ಕಡೆಗೆ ವಲಸೆ ಬಂದಿರಬೇಕು ಎಂದು ನಮ್ಮಜ್ಜಿ ಹೇಳಿದ್ದಾರೆ ಎಂದು ನಮ್ಮಜ್ಜಿ ನನಗೆ ಹೇಳಿದ್ದಾರೆ.
ಈಗ ನಾನು ಹೇಳ ಹೊರಟಿರುವುದು, ನನ್ನದೇ ಮನೆಯಲ್ಲಿ ನಡೆದ ಕಥೆ. ಸುಮಾರು ೭೦ರ ದಶಕದ ಕಥೆ.
ನಮ್ಮ ಮನೆಯಿಂದ ಸುಮಾರು ೧೦ಕಿ.ಮೀ. ನಡೆದ ಮೇಲೆ ತಾಲೂಕು ಕೇಂದ್ರಕ್ಕೆ ದಿನಕ್ಕೆ ಎರಡು ಬಾರಿ ಬಸ್ ಸಿಗುತ್ತಿತ್ತು. ಪಿಯು, ಡಿಗ್ರಿ ಓದುವ ಮನೆ ಮಕ್ಕಳಿಗಾಗಿ ಪೇಟೆಯಲ್ಲಿ ಚಿಕ್ಕದೊಂದು ಬಿಡಾರವೂ ಇತ್ತು. ಹೈಸ್ಕೂಲು ವರೆಗಿನ ಮಕ್ಕಳು ಮನೆಯಲ್ಲೇ ಉಳಿದು, ತೋಟದ ಕೆಲಸ ಮಾಡಿಕೊಂಡು ಹಳ್ಳಿಯ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು.
ನನ್ನ ತಂದೆಯ ಸೋದರತ್ತೆಯವರು ನಮಗಿಂತ ದೂರದ, ಹೊಳೆಯಾಚೆಗೆ ಇದ್ದು ಊರಿನಲ್ಲಿದ್ದ ಕಾರಣ ಅವರು ಮಕ್ಕಳೆಲ್ಲ ನಮ್ಮಲ್ಲೇ ಇದ್ದು ಶಾಲೆಗೆ ಹೋದವರು.

ಅತ್ತೆಯ ಕೊನೆಯ ಮಗ, ಕುಟುಂಬದ ಈವರೆಗಿನ ಎಲ್ಲಾ 15-20 ಮಕ್ಕಳಲ್ಲಿ ಅತಿ ಜೋರು.
ಎಲ್ಲರಿಗೂ ಬಿಟ್ಟಿ ಚಾಕರಿ ಗೆ ಪಾಪ, ಇವನೇ ಬೇಕು.
ಒಂದು ಬಾರಿ ಅಪರೂಪಕ್ಕೆ ಮಾಡಿದ ಸ್ವೀಟೂ ಸಿಗಲಿಲ್ಲವಂತೆ. ಜ್ವರ ಬಂದ ಕಾರಣ ಮಾಡಿದ ದಿನ ಕೊಡಲಿಲ್ಲ; ವಾಸಿಯಾದಾಗ ಪಾಪ ತಿಂಡಿ ಉಳಿದಿರಲಿಲ್ಲ. ಕೊಡದಿದ್ದರೆ ಶಾಲೆಗೆ ಹೋಗಲಾರೆ ಎಂದು ರಂಪ ಮಾಡಿದಾಗ ದೊಡ್ಡ ಮಾವ (ನನ್ನಜ್ಜ) ಎರಡೇಟು ಬಿಗಿದರು.

೧೦ ವರ್ಷ ವಯಸ್ಸಿನ ನಮ್ಮ ಚೇತು ಕೋಪಗೊಂಡು ಅಣ್ಣ ಅಕ್ಕಂದಿರೊಂದಿಗೆ ಶಾಲೆಗೆ ಜೊತೆಯಾಗಿ ಹೋಗಲಿಲ್ಲ.
೨ನೇ ದಿನ, ಒಬ್ಬನೇ ಶಾಲೆಗೆ ತೋಟದ ದಾರಿಯಾಗಿ ಹೋಗುತ್ತಿದ್ದಾಗ, ಚೀಲವೊಂದರಲ್ಲಿ ೪-೫ ತೆಂಗಿನ ಕಾಯಿ ಸಿಕ್ಕವು. ಹಿಂದಿನ ದಿನ ತೋಟದ ಆಳು ಮಹಾಲಿಂಗ ಮರೆತು ಅಲ್ಲೇ ಬಿಟ್ಟು ಹೋದಂತಿತ್ತು.

ಶಿವರಾಮನ ಅಂಗಡಿಯ ಕೊಬ್ಬರಿ ಮಿಠಾಯಿ ತಿಂದು ಸೇಡು ತೀರಿಸಲು ಅಣ್ಣಾವ್ರು ತೆಂಗಿನ ಕಾಯಿ ಹೊತ್ತು ಮುಂದೆ ಹೋದರು!

ಆಗಿನ ಕಾಲದಲ್ಲಿ ನಮ್ಮ ಅಜ್ಜ ವರ್ಷಕ್ಕೊಮ್ಮೆ ಲಾರಿಯಲ್ಲಿ ಅಡಿಕೆಯನ್ನು ಮಂಗಳೂರಿನ ಮಾರುಕಟ್ಟೆ ಯಲ್ಲಿ ಮಾರಿ, ಮನೆಯ ೨೫-೩೦ ಮಂದಿಗೆ ವರ್ಷವಿಡೀ ಬೇಕಾಗುವ ಅಕ್ಕಿ, ಬೇಳೆ, ಮೆಣಸು ಇತ್ಯಾದಿ ತೆಗೆದು ಕೊಂಡು ಬರುತ್ತಿದ್ದರು.
ಒಂದುವರೆ ಟನ್ ಅಕ್ಕಿ, ೨ ಕ್ವಿಂಟಾಲ್ ಬೇಳೆ, ೨೫ ಕಿಲೋ ಚಹಾ ಪುಡಿ ತರುವ ಮನೆಯ ಹುಡುಗ, ೪-೫ ತೆಂಗಿನ ಕಾಯಿ ಮಾರಿ, ೧೦೦ ಗ್ರಾಂ ಚಹಾ ಪುಡಿ ಹಾಗೂ ಉಳಿದ ಹಣದಲ್ಲಿ ಕೊಬ್ಬರಿ ಮಿಠಾಯಿ ಕೇಳಿದಾಗ ಅಂಗಡಿಯವನಿಗೆ ಸಂದೇಹ.
ಯಾವಾಗಲೂ ಮಾತನಾಡುವ ಹುಡುಗ ಇಂದು ಸ್ವಲ್ಪವೇ ಬಾಯಿ ತೆರೆಯುತ್ತಿದ್ದಾನೆ…..

ಹೀಗೆ ಮಿಠಾಯಿ ತಿಂದು, ಶಾಲೆಗೆ ಹೋಗಿ, ಕೊನೆಗೆ ರಾತ್ರಿ ಊರಲ್ಲಿ ನಡೆದ ಯಕ್ಷಗಾನ ಬಯಲಾಟ ನೋಡಲು ಹೋದ.
ನಮ್ಮ ಮನೆಯಿಂದ ಕೆಲವರು ಅಲ್ಲಿದ್ದರು. ಬೆಳಗಾಗುತ್ತಿದ್ದಂತೆ ಈ ಪುಣ್ಯಾತ್ಮ ಬಯಲಾಟದವರ ಲಾರಿಯನ್ನೇರಿ ಪುತ್ತೂರು ತಲುಪಿದ.

ಪುತ್ತೂರು ನಗರದಲ್ಲಿ ನಮ್ಮ ದೊಂದು ಸಣ್ಣ ಬಿಡಾರವೊಂದಿತ್ತು ಎಂದು ಹೇಳಿದ್ದನಲ್ಲಾ? ಅಲ್ಲಿ ಕಾಲೇಜು ಹೋಗುತ್ತಿರುವ ಮನೆ ಮಕ್ಕಳೂ, ಹೆಚ್ಚಾಗಿ ಉಷಾರಿಲ್ಲದ ನಮ್ಮ ಅಜ್ಜಿಯೂ ಇರುತ್ತಿದ್ದರು.

ಪಕ್ಕದ ಮನೆಯ ಹುಡುಗನೊಬ್ಬ ಬಂದು ನನ್ನ ಚಿಕ್ಕಪ್ಪ ನಲ್ಲಿ ಬಂದು..” ಏ ಶ್ರೀಧರಾ, ಆ ಗುಂಗುರು ಕೂದಲಿನ ಚೇತನ ನಿನ್ನ ತಮ್ಮ ಅಲ್ಲವಾ, ಅವನು ನಿಮ್ಮ ಊರಿಗೆ ಹೋಗುವ ಶಂಕರ್ ವಿಠಲ ಬಸ್ಸಿನ ಹಿಂಬದಿ ಕೇರಿಯರ್ನಲ್ಲಿ ನೇತಾಡಿಕೊಂಡು ಹೋಗ್ತಾ ಇದ್ದ …..”

“ಸಾಧ್ಯವೇ ಇಲ್ಲ” , ಅಂತ ನನ್ನ ಚಿಕ್ಕಪ್ಪನ ವಾದ.
“ನೀನು ಶ್ರೀಧರನ ತಮ್ಮ ಅಲ್ಲವಾ ಎಂದು ಕೇಳಿದರೆ ಅಲ್ಲ ಎಂದ… ಸರೋಜಿನಿಯ ತಮ್ಮ ನೇ ಅಂತ ಕೇಳಿದಾಗ.. ಸರೋಜನೂ ಗೊತ್ತಿಲ್ಲ, ಅವಳ ಅಪ್ಪನೂ ಗೊತ್ತಿಲ್ಲ ಅಂತ ಹೇಳಿದ ಮಾರಾಯಾ .. ಅಂತ ಆ ವ್ಯಕ್ತಿ ಹೇಳಿದಾಗ ಇರಬಹುದೇನೊ ಎಂಬ ಸಣ್ಣ ಸಂಶಯ ಉಂಟಾಯಿತು.
ಮನೆ ಯಲ್ಲಿ ಹೇಳಿ ಎಲ್ಲರಿಗೂ ಚಿಂತೆ ಮಾಡುವುದು ಬೇಡ ಎಂದು ಚಿಕ್ಕಪ್ಪ ಯಾರಲ್ಲೂ ಏನೂ ಹೇಳಲಿಲ್ಲ.
ಹೇಗೂ ಸಿಕ್ಕಿರುವ ಮಾಹಿತಿ ಪೂರ್ತಿಯಾಗಿ ಸತ್ಯವೋ ಸುಳ್ಳೋ ಗೊತ್ತಿಲ್ಲ. ಆ ವ್ಯಕ್ತಿ ಚೇತನನನ್ನು ಹೆಚ್ಚು ಎಂದರೆ, ಒಂದೆರಡು ಬಾರಿ ನೋಡಿದ್ದಿರಬಹುದು…
ಪ್ರತಿ ಸ್ಟಾಪಿನಲ್ಲಿ ಬಸ್ಸಿನ ಹಿಂಬದಿಯ ಏಣಿಯಿಂದ ಇಳಿದು, ಬಸ್ ಸ್ಟಾರ್ಟ್ ಆದಾಗ ಮತ್ತೆ ಓಡಿ ಏಣಿ ಹತ್ತಿ, ಕೊನೆಗೂ
ಸ್ಟಾಪಿನಲ್ಲಿ ಇಳಿದ.

ಇನ್ನೂ ಮನೆಗೆ ಹೋಗಲು ೬-೭ಮೈಲು ನಡೆಯಬೇಕಲ್ಲ?

ಒಂದೆಡೆ ಹಸಿವು, ಒಂದೆಡೆ ದಣಿವು..
ಅಲ್ಲೇ ಹೊಸದಾಗಿ ಶುರುವಾಗಿದ್ದ ಹೋಟೆಲ್ ನಲ್ಲಿ ನಿಂತು, ಬೆಳಿಗ್ಗೆ ಉಳಿದಿದ್ದ ತಿಂಡಿ ತಿಂದ.
ಅಲ್ಲೇ ಇದ್ದ ಕಬ್ಬಿನ ಹಾಲು ಕೂಡ ಬೇಕೆಂದು ತೋರಿತು.
“ನನಗೆ ಆ ಊಸಿನ ರಸ ಬೇಕು” ಎಂದು ಹೇಳಿದ ತಕ್ಷಣ ಹಲವರು ಗೊಳ್ಳೆಂದು ನಕ್ಕರು.(ಮರಾಠಿ ಭಾಷೆಯಲ್ಲಿ ಕಬ್ಬು =ಊಸ್ (ऊस) )
ನೆರೆದವರೆಲ್ಲರಿಗೂ ೨ ನಿಮಿಷದಲ್ಲೇ ಈ ಹೂಸಿನ ರಸದ ಕಥೆಯ ಕಂಪು ಹರಡಿತು.
ಇವ ಯಾರು? ಯಾವ ಭಟ್ರ ಮಗ ಎಂದು ಜನ ವಿಶ್ಲೇಷಣೆ ಮಾಡುವ ವೇಳೆಯಲ್ಲಿ ಸೈಲೆಂಟಾಗಿ ಎಸ್ಕೇಪಾಗಿ ಮನೆಗೆ ಹೋದನಂತೆ!
ದೊಡ್ಡ ಮಾವ ಬೆತ್ತ ಹಿಡಿದು ಕಾಯುತ್ತಾ ನಿಂತಿದ್ದಾರೆ ಎಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಾಲಿಂಗ ಹೇಳಿದ.

ಹೋಗುವಾಗ ಇದ್ದಷ್ಟು ಕೂಡ ಮಾನ ಈಗ ಉಳಿದಿರಲಿಲ್ಲ.

ಬಾಯಿಯಿಂದ ಬಾಯಿಗೆ ವಿಷಯ ತಿಳಿದು ಕೊನೆಗೆ ಆ ಹೂಸಿನ ರಸದ ಕಥೆ ಕೇಳದವ ಹತ್ತೂರಲ್ಲೂ ಇರಲಿಲ್ಲ.

ಕಳೆದ ವರ್ಷ ಊರಿಗೆ ಬಂದಿದ್ದ ಚೇತನ್ ಮಾವನನ್ನು ನನ್ನ ಚಿಕ್ಕಪ್ಪ : ऊसाचे रस पाहिजे का? ಎಂದು ಮತ್ತೆ ಮತ್ತೆ ಕೇಳಿದಾಗ ನಾವೂ ಜೊತೆಯಲ್ಲಿ ಇದ್ದೆವು. ಮುಸಿ ಮುಸಿ ಇದ್ದ ಕಥೆ ಮರುದಿನ ಹೇಳಿದಾಗ ನಾವು ಮಕ್ಕಳು ಕೇಳಿ, ನಕ್ಕು  ಸುಸ್ತೋ ಸುಸ್ತು.